ನವೀನ ಭಾರತ -
ಬಿಜಾಪುರ ಜಿಲ್ಲೆಯ ಬಾಗಲಕೋಟೆಯಿಂದ ಪ್ರಕಟವಾಗುತ್ತಿದ್ದ ಒಂದು ನಿಯತಕಾಲಿಕೆ. 1921ರ ಜನವರಿಯಲ್ಲಿ ಪ್ರಾರಂಭವಾಯಿತು. ರಾಜಕೀಯ ವಿಚಾರಗಳನ್ನು ಕೂಡ ಸಾಹಿತ್ಯ ಶೈಲಿಯಲ್ಲಿ ನಿರೂಪಿಸುತ್ತಿದ್ದ ಈ ಪತ್ರಿಕೆಯ ಸಂಪಾದಕರು ಯ.ವಾ. ಧಾರವಾಡಕರರು. ಅವರು ತುಂಬ ನಿರ್ಭಯವಾಗಿ ಲೇಖನಗಳನ್ನೂ ಅಗ್ರಲೇಖನಗಳನ್ನೂ ಬರೆಯುತ್ತಿದ್ದರು. ರಾಜಕೀಯ ವಿಚಾರಗಳ ಜೊತೆಗೆ ಕವನ, ಪ್ರಬಂಧ, ವಿಶಿಷ್ಟ ಬಗೆಯ ವಿಮರ್ಶೆ ಮುಂತಾದವೂ ಇಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಸಂಪಾದಕರು ಅಗ್ರಲೇಖನದಲ್ಲಿ ಒಬ್ಬ ತಾಲ್ಲೂಕು ಅಧಿಕಾರಿಯನ್ನು ಬಲವಾಗಿ ಟೀಕಿಸಿದರು. ಇದರಿಂದ ಈ ಪತ್ರಿಕೆಯನ್ನು ಮುದ್ರಿಸುತ್ತಿದ್ದ ಚಂದ್ರಿಕಾ ಮುದ್ರಣಾಲಯದವರು ಇದನ್ನು ಪ್ರಕಟಿಸಲು ಹಿಂದೆಮುಂದೆ ನೋಡಿದರು. ಆದ್ದರಿಂದ 1923ರಲ್ಲಿ ಇದು ನಿಂತುಹೋಯಿತು. 1921ರ ಆಗಸ್ಟ್ 15ರ ಸಂಚಿಕೆಯಲ್ಲಿ ಬ್ರಾಹ್ಮಣ-ಲಿಂಗಾಯಿತರ ಪ್ರಶ್ನೆಯು ಎಂಬ ವಿಷಯವಾಗಿ ಅಗ್ರಲೇಖನ ಬರೆದು ಈ ಸಮಸ್ಯೆಯನ್ನು ಕೂಲಂಕಷವಾಗಿ ಚರ್ಚಿಸಿ ಇವರಿಬ್ಬರಲ್ಲಿ ಕಂಡುಬರುವ ತಪ್ಪು ತಿಳುವಳಿಕೆಯಿಂದ ಯಾವ ರೀತಿ ಅನರ್ಥವಾಗುವುದೆಂಬುದನ್ನು ಎತ್ತಿತೋರಿಸಲಾಗಿತ್ತು. ಈ ಪತ್ರಿಕೆಯಲ್ಲಿ ಡಿಮೈ ಪೂರ್ಣ ಆಕಾರದ ನಾಲ್ಕು ಪುಟಗಳಿದ್ದವು. ಬೆಲೆ 1 ಆಣೆ (ಈಗಿನ 6 ಪೈಸೆ).							
		(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ